ಹರಿಕಥಾಮೃತಸಾರ ಗುರುಗಳ |
ಕರುಣದಿಂದಾಪನಿತು ಪೇಳುವೆ |
ಪರಮಭಗವದ್ಭಕ್ತರಿದನಾದರದಿ ಕೇಳುವುದು || ಪ ||
ಶ್ರೀಶನಂಘ್ರಿಸರೋಜಭೃಂಗ ಮ-
ಹೇಶಸಂಭವ ಮನ್ಮನದೊಳು ಪ್ರ-
ಕಾಶಿಸನುದಿನ ಪ್ರಾರ್ಥಿಸುವೆ ಪ್ರೇಮಾತಿಶಯದಿಂದ |
ನೀ ಸಲಹು ಸಜ್ಜನರ ವೇದ-
ವ್ಯಾಸಕರುಣಾಪಾತ್ರ ಮಹದಾ-
ಕಾಶಪತಿ ಕರುಣಾಳು ಕೈಪಿಡಿದೆಮ್ಮನುದ್ಧರಿಸು || ೧ ||
ಏಕದಂತ ಇಭೇಂದ್ರಮುಖ ಚಾ-
ಮೀರಕೃತಸುಭೂಷಣಾಂಗ ಕೃ-
ಪಾಕಟಾಕ್ಷದಿ ನೋಡು ವಿಜ್ಞಾಪಿಸುವೆ ಇನಿತೆಂದು |
ನೋಕನೀಯನ ತುತಿಸುತಿಪ್ಪ ವಿ-
ವೇಕಿಗಳ ಸಹವಾಸಸುಖಗಳ
ನೀ ಕರುಣಿಸುವದೆಮಗೆ ಸಂತತ ಪರಮಕರುಣದಲಿ || ೨ ||
ವಿಘ್ನರಾಜನೆ ದಿರ್ವಿಷಯದೊಳು
ಮಗ್ನವಾಗಿಹ ಮನವ ಮಹದೋ-
ಷಘ್ನನಂಘ್ರಿಸರೋಜಯುಗಳದಿ ಭಕ್ತಿಪೂರ್ವಕದಿ |
ಲಗ್ನವಾಗಲಿ ನಿತ್ಯ ನರಕ ಭ-
ಯಾಗ್ನಿಗಳಿಗಾನಂಜೆ ಗುರುವರ
ಭಗ್ನಗೈಸೆನ್ನವಗುಣಗಳನು ಪ್ರತಿದಿವಸದಲ್ಲಿ || ೩ ||
ಧನಪ ವಿಷ್ವಕ್ಸೇನ ವೈದ್ಯಾ-
ಶ್ವಿನಿಗಳಿಗೆ ಸರಿಯೆನಿಪ ಷಣ್ಮುಖ-
ನನುಜ ಶೇಷಶತಸ್ಥದೇವೋತ್ತಮ ವಿಯದ್ಗಂಗಾ- |
ವಿನುತ ವಿಶ್ವೋಪಾಸಕನೆ ಸ-
ನ್ಮನದಿ ವಿಜ್ಞಾಪಿಸುವೆ ಲಕ್ಷ್ಮೀ
ವನಿತೆಯರಸನ ಭಕ್ತಿಜ್ಞಾನವ ಕೊಟ್ಟು ಸಲಹುವದು || ೪ ||
ಚಾರುದೇಷ್ಣಾಹ್ವಯನೆನಿಸಿ ಅವ-
ತಾರ ಮಾಡಿದೆ ರುಗ್ಮಿಣೀಯಲಿ
ಗೌರಿಯರಸನ ವರದಿ ಉದ್ಧಟರಾದ ರಾಕ್ಷಸರ |
ಶೌರಿಯಾಜ್ಞದಿ ಸಂಹರಿಸಿ ಭೂ-
ಭಾರವಿಳುಹಿದ ಕರುಣಿ ತ್ವತ್ಪಾ-
ದಾರವಿಂದಕೆ ನಮಿಪೆ ಕರುಣಿಪುದೆಮಗೆ ಸನ್ಮತಿಯ || ೫ ||
Continue reading →
Like this:
Be the first to like this post.